ಪಹಡಾಪುರ -
ಕಲ್ಕತ್ತಾ-ಡಾರ್ಜಿಲಿಂಗ್ ರೈಲುಮಾರ್ಗದ ಮೇಲೆ ಇರುವ ಜಮಾಲ್‍ಗಂಜ್ ನಿಲ್ಧಾಣದ ಪಶ್ಚಿಮಕ್ಕೆ ಸುಮಾರು 4.8 ಕಿಮೀ. ದೂರದಲ್ಲಿ ಉ.ಅ. 25ಲಿ2 ಮತ್ತು ಪೂ.ರೆ.89ಲಿ3 ಮೇಲೆ ಇರುವ ಒಂದು ಗ್ರಾಮ. ಇದರ ಬಳಿ ಇರುವ ಬೆಟ್ಟದಿಂದಾಗಿ ಈ ಊರಿಗೆ ಪಹಡಾಪುರವೆಂಬ ಹೆಸರು ಬಂದಿರಬೇಕು. 

1807-12ರಲ್ಲಿ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯ ಆದೇಶದಂತೆ ಪೂರ್ವಭಾರತವನ್ನು ಪರಿವೀಕ್ಷಿಸಿದ ಬುಖಾನನ್ ಹ್ಯಾಮಿಲ್ಟನ್ ಮೊದಲ ಬಾರಿಗೆ ಈ ಗ್ರಾಮದ ದಿಬ್ಬವೊಂದನ್ನು ಗಮನಿಸಿ ಅದನ್ನು ತನ್ನ ವರದಿಯಲ್ಲಿ ಸೂಚಿಸಿದ. ಅನಂತರ ವೆಸ್ಟ್‍ಮ್ಯಾಕತ್ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ. 1879ರಲ್ಲಿ ಅಲೆಕ್ಸಾಂಡರ್ ಕನಿಂಗ್‍ಹ್ಯಾಮ್ ಈ ದಿಬ್ಬದ ಬಗ್ಗೆ ತನ್ನ ವರದಿಯಲ್ಲಿ ಸೂಚಿಸಿದ. ಈ ಪ್ರದೇಶ ಸ್ಥಳೀಯ ಜಮೀನುದಾರನೊಬ್ಬನಿಗೆ ಸೇರಿತ್ತಾದ್ದರಿಂದ ಅವನ ಅಡ್ಡಿಯಿಂದಾಗಿ ಇಲ್ಲಿ ಉತ್ಖನನ ನಡಿಸುವುದು ಸಾಧ್ಯವಾಗಲಿಲ್ಲ. 1919ರಲ್ಲಿ ಇಲ್ಲಿಯ ದಿಬ್ಬ ಹಾಗೂ ಅದರ ಸುತ್ತಲ ಪ್ರದೇಶ ಪುರಾತತ್ವ ಇಲಾಖೆಗೆ ಸೇರಿ ಅವು ರಾಷ್ಟ್ರೀಯ ಸ್ಮಾರಕಗಳೆಂದು ಘೋಷಿತವಾದುವು. 1923ರಿಂದ 1934ರ ವರೆಗೆ ಆಗಾಗ್ಗೆ ಇಲ್ಲಿ ಉತ್ಖನನಗಳು ನಡೆದುವು.

ಪೂರ್ವಭಾರತದಲ್ಲಿ ಆಳಿದ ಪಾಲವಂಶದ ದೊರೆಗಳ ಕಾಲದಲ್ಲಿ ಬೌದ್ಧಧರ್ಮಕ್ಕೆ ವಿಶೇಷವಾದ ಉತ್ತೇಜನ ದೊರಕಿದ್ದಾಗ ಪಹಡಾಪುರ ಒಂದು ಪ್ರಮುಖ ಧಾರ್ಮಿಕ ಕೇಂದ್ರವಾಗಿತ್ತು. ಇಲ್ಲಿಯ ದಾಖಲಗಳು ಹಾಗೂ ಪರಂಪರೆಯಲ್ಲಿ ರಾಜ ಧರ್ಮಪಾಲನ ಸೋಮಪುರದ ಮಹಾವಿಹಾರದ ಉಲ್ಲೇಖ ಇರುವುದರಿಂದ ಸೋಮಪುರ ಎಂಬುದು ಪಹಡಾಪುರದ ಹಿಂದಿನ ಹೆಸರೆಂದು ಗೊತ್ತಾಗುತ್ತದೆ. ಇಲ್ಲಿಯ ಮಹಾವಿಹಾರದ ನೆನಪು ಮಹಾಯಾನ ಬೌದ್ಧ ಪರಂಪರೆಯಲ್ಲಿ ಸುಮಾರು 17ನೆಯ ಶತಮಾನದವರೆಗೂ ಉಳಿದುಬಂದಿತ್ತು. ಸೋಮಪುರದ ಬೌದ್ಧ ಭಿಕ್ಷುಗಳು 10-11ನೆಯ ಶತಮಾನಗಳಲ್ಲಿ, ನಳಂದ, ಬೋಧ್‍ಗಯಾ ಮುಂತಾದ ಬೌದ್ಧ ಕೇಂದ್ರಗಳಲ್ಲಿ ದಾನದತ್ತಿಗಳನ್ನು ನೀಡಿರುವುದು ಕಂಡುಬರುತ್ತದೆ. ಆದ್ದರಿಂದ ಈ ಕಾಲದಲ್ಲಿ ಈ ಗ್ರಾಮ ಸುಸ್ಥಿತಿಯಲ್ಲಿತ್ತೆಂಬ ವಿಷಯ ವಿದಿತವಾಗುತ್ತದೆ. ಇಲ್ಲಿ ದೊರೆತ ಕೆಲವು ಶಿಲ್ಪಗಳು ಮತ್ತು ಶಾಸನಾಧಾರಗಳು ಪಾಲರ ಕಾಲಕ್ಕಿಂತ ಹಿಂದೆಯೇ ಈ ಗ್ರಾಮ ಅಸ್ಥಿತ್ವದಲ್ಲಿತ್ತೆಂಬುದನ್ನು ಸೂಚಿಸುತ್ತವೆ.

ಇಲ್ಲಿಯ ಮುಖ್ಯ ದೇವಾಲಯದ ವಿನ್ಯಾಸ ಭಾರತೀಯ ವಾಸ್ತುಕ್ಷೇತ್ರದಲ್ಲಿ ವಿಶಿಷ್ಟವಾದ್ದು. ಬೃಹದ್ಭ್ರಾರತಕ್ಕೆ ಸೇರಿದ್ದ ಬರ್ಮ, ಜಾವ, ಕಾಂಬೋಡಿಯಾಗಳ ದೇವಾಲಯಗಳ ಮೂಲವೆನ್ನಬಹುದಾದ ಅಪೂರ್ವಶೈಲಿಯ ರಚನೆ ಇಲ್ಲಿಯದು. ಇದರಲ್ಲಿ ಶಿಲುಬೆಯಂತೆ ಮಧ್ಯದಲ್ಲಿರುವ ರಚನೆಯ ಸುತ್ತ ಮೂರು ಅಂತಸ್ತುಗಳ ಕಟ್ಟಡವಿದೆ. ನಾಲ್ಕು ಬದಿಗಳಲ್ಲಿ ಆಯಾಕಾರದ ಚಾಚುಗಳಿವೆ. ಅವು ಅಲಂಕೃತ ಇಟ್ಟಿಗೆಗಳು ಮತ್ತು ಸಾವಿರಾರು ಮೃಣ್ಮಯ ಫಲಕಗಳ ಪಟ್ಟಿಕೆಗಳಿಂದ ಕೂಡಿವೆ. ಪಟ್ಟಿಕೆಗಳ ಮೇಲೆ ಮಾನವರ ಹಾಗೂ ಪ್ರಾಣಿಗಳ ವಿವಿಧ ಭಂಗಿಗಳನ್ನು ಪುರಾಣಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಜಾನಪದ ಘಟನೆಗಳನ್ನು ಚಿತ್ರಿಸಲಾಗಿದೆ. ಅದಿಷ್ಟಾನದ ಗೂಡುಗಳಲ್ಲಿ ಕುತೂಹಲಕರವಾದ, ಕಲಾತ್ಮಕವಾದ ಅನೇಕ ಕಲ್ಲಿನ ಉಬ್ಬು ಶಿಲ್ಪಗಳಿವೆ. ಇಲ್ಲಿ ಅಥವಾ ಇದರ ಪರಿಸರದಲ್ಲಿ ಜೈನರ ಚತುರ್ಮುಖ ಬಸದಿ ಇದ್ದಿರಬೇಕೆಂಬ ಊಹೆ ಇದೆ. ಇಲ್ಲಿ ದೊರೆತ 5ನೆಯ ಶತಮಾನದ ತಾಮ್ರಶಾಸನವೊಂದರಲ್ಲಿ, ಜಿನಾರ್ಚನೆಗೆ ಭೂದಾನ ನೀಡಿದುದರ ಉಲ್ಲೇಖವಿದೆ. ದೇವಾಲಯದ ಸುತ್ತ ವಿಹಾರವನ್ನು ಕಟ್ಟಿದೆ. ಎತ್ತರವಾದ ಜಗತಿಯ ಮೇಲೆ ನಿಂತಿರುವ ದೇವಾಲಯದ ಎರಡೂ ಪಾಶ್ರ್ವಗಳಲ್ಲಿ ಮಂಟಪಗಳುಂಟು. ಸುತ್ತ ಪ್ರದಕ್ಷಿಣಾ ಪಥವಿದೆ. ವಿಹಾರವನ್ನು ಪ್ರವೇಶಿಸಲು ಉತ್ತರದಲ್ಲಿ ಮಹಾದ್ವಾರವುಂಟು. ಉಳಿದ ಮೂರು ಕಡೆ ಮಧ್ಯದಲ್ಲಿ ಆರಾಧನಾ ಮಂದಿರಗಳಿವೆ. ಒಟ್ಟು ಸುಮಾರು 200 ವಾಸದ ಕೋಣೆಗಳು ಇಲ್ಲಿವೆ. ಮಧ್ಯಜಾವಾದ ಪ್ರಾಂಬನಂನಲ್ಲಿರುವ ಎರಡು ದೇವಾಲಯಗಳ ವಿನ್ಯಾಸವನ್ನು ಪಹಡಾಪುರ ದೇವಾಲಯ ಬಹುಮಟ್ಟಿಗೆ ಹೋಲುತ್ತದೆ. ಗೋಡೆಗಳ ಮೇಲಿರುವ ಮೃಣ್ಮಯ ಫಲಕಗಳ ಪ್ರಭಾವ ಬರ್ಮದ ಪಗೋಡಗಳ ಮೇಲಿನ ಫಲಕಗಳಲ್ಲಿ ಕಾಣಿಸಿಕೊಂಡಿದೆ. 

10-11ನೆಯ ಶತಮಾನದಲ್ಲಿ ಇಲ್ಲಿಯ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಲಾಯಿತು. ಮುಸ್ಲಿಂ ದಾಳಿಯ ಕಾಲದವರೆಗೂ ಇಲ್ಲಿಯ ಸ್ಮಾರಕಗಳು ಸುಸ್ಥಿತಿಯಲ್ಲಿದ್ದುವು.						(ಹೆಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ